Thursday, May 26, 2016

ಶತಮಾನದಲ್ಲಿ ಇದೇ ಮೊದಲ ಬಾರಿ ಹರಿವು ನಿಲ್ಲಿಸಿದ ಅಘನಾಶಿನಿ/ ಅಳಿವಿನ ಅಂಚಿನಲ್ಲಿವೆ ನೀರುನಾಯಿಗಳು

ಬಿಸಿಲ ಬೇಗೆಗೆ ಬಸವಳಿದ ಮಲೆನಾಡು

ಮಲೆನಾಡಿನಲ್ಲಿ ಬರದ ಬೇಗೆಗೆ ಜಲಮೂಲಗಳು ಬತ್ತಲು ಆರಂಭಿಸಿದೆ. ಮಲೆನಾಡಿನ ನದಿಗಳು, ಹಳ್ಳಗಳು ಬತ್ತಿವೆ. ಶತಮಾನದ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅಘನಾಶಿನಿ ನದಿ ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಹರಿವು ನಿಲ್ಲಿಸಿದೆ.

 ಅಘನಾಶಿನಿ ನದಿ ಮುಖ್ಯವಾಗಿ ಶಿರಸಿಯ ಶಂಕರಹೊಂಡ ಹಾಗೂ ಶಿರಸಿ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯಲ್ಲಿ ಹುಟ್ಟುತ್ತದೆ. ನಂತರ ಈ ಎರಡೂ ಕವಲುಗಳು ಸಿದ್ದಾಪುರ ತಾಲೂಕಿನ ಮಾನಿಹೊಳೆ ಎಂಬಲ್ಲಿ ಸಂಗಮವಾಗಿ ಉಂಚಳ್ಳಿಯಲ್ಲಿ ಜಲಪಾತದ ಮೂಲಕ ಧುಮ್ಮಿಕ್ಕಿ ಕರಾವಳಿ ಪ್ರದೇಶವನ್ನು ಸೇರುತ್ತದೆ. ನಂತರ ಕುಮಟಾ ತಾಲೂಕಿನಲ್ಲಿ ಹರಿದು ಹೋಗುವ ನದಿ ಅಘನಾಶಿನಿ ಎಂಬಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಹೀಗೆ ಸಮುದ್ರವನ್ನು ಸೇರುವುದಕ್ಕೂ ಮೊದಲು 98 ಕಿಲೋಮೀಟರ್ ದೂರ ಹರಿಯುತ್ತದೆ. ಈ ಅವಧಿಯಲ್ಲಿ ಸಹಸ್ರಾರು ಕುಟುಂಬಗಳು, ಸಹಸ್ರಾರು ಎಕರೆ ಪ್ರದೇಶಗಳು ಅಘನಾಶಿನಿ ನದಿಯನ್ನೇ ಅವಲಂಭಿಸಿವೆ.
 ಅಘನಾಶಿನಿ ನದಿ ಈ ವರ್ಷ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಬತ್ತಿ ಹೋಗಿದೆ. ಶತಮಾನಗಳ ಅವಧಿಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಈ ನದಿ ತನ್ನ ಹರಿವನ್ನು ನಿಲ್ಲಿಸಿದೆ. ಪರಿಣಾಮವಾಗಿ ಅಘನಾಶಿನಿ ಕಣಿಯ ರೈತರು, ಅಡಿಕೆ ಬೆಳೆಗಾರರು, ಅಘನಾಶಿನಿ ನದಿಯ ನೀರನ್ನೇ ನೆಚ್ಚಿಕೊಂಡಿದ್ದ ಜನಸಾಮಾನ್ಯರು ಹೈರಾಣಾಗಿದ್ದಾರೆ. ನದಿ ತೀರದದಲ್ಲಿದ್ದ ಅಡಿಕೆ ತೋಟಗಳು ಒಣಗಿ ಹೋಗಿವೆ. ಅಪ್ಪೆಮರಗಳು ನೀರಿಲ್ಲದೇ ಸೊರಗಿದೆ. ಕೆಪ್ಪ ಜೋಗ ಎನ್ನುವ ಹೆಸರನ್ನು ಪಡೆದು, ಎಲ್ಲರ ಕಿವಿ ಕಿವುಡಾಗುವಂತೆ ಅಬ್ಬರದಿಂದ ಧುಮ್ಮಿಕ್ಕುತ್ತಿದ್ದ ಉಂಚಳ್ಳಿ ಜಲತಾದ ಸದ್ದು ಅಡಗಿದೆ. ಅಘನಾಶಿನಿ ನದಿ ನೀರನ್ನೇ ಅವಲಂಬಿಸಿದ್ದ ಅಪರೂಪ ಸಿಂಗಳೀಕಗಳು, ಕಾಡೆಮ್ಮೆಗಳಿಗೂ ಕುಡಿಯಲು ನೀರಿಲ್ಲ.
 ಪ್ರತಿ ವರ್ಷ ಮೇ ತಿಂಗಳಿನಲ್ಲಿ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗುತ್ತಿತ್ತು. ಎಪ್ರಿಲ್ ಹಾಗೂ ಮೇ ತಿಂಗಳಿನ ಬಿರು ಬೇಸಿಗೆಗೆ ನದಿಯಲ್ಲಿ ನೀರು ಕಡಿಮೆಯಾದರೂ ಕೂಡ ಕೃಷಿಗೆ, ಕೃಷಿಪೂರಕ ಚಟುವಟಿಕೆಗಳಿಗೆ ಅಭಾವ ಉಂಟಾಗುತ್ತಿರಲಿಲ್ಲ. ಆದರೆ ಈ ಸಾರಿ ಮಾತ್ರ ಎಪ್ರಿಲ್ ತಿಂಗಳಿನಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿತ್ತು. ಮೇ ತಿಂಗಳ ಆರಂಭದಲ್ಲಿಯೇ ನೀರು ಹರಿಯುವುದು ನಿಂತಿದೆ. ಶಿರಸಿ ನಗರಕ್ಕೆ ಅಘನಾಶಿನಿ ನದಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ನೀರು ಹರಿಯುವುದು ನಿಂತಿರುವ ಪರಿಣಾಮ ಶಿರಸಿ ನಗರಕ್ಕೆ ನೀರಿನ ಸರಬರಾಜು ನಿಂತಿದೆ. ಇದರಿಂದಾಗಿ ಶಿರಸಿ ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಇದಲ್ಲದೇ ಅಘನಾಶಿನಿ ನದಿಯ ನೀರನ್ನೇ ಅವಲಂಭಿಸಿದ್ದ ಶಿರಸಿ ತಾಲೂಕಿನ ರೇವಣಕಟ್ಟಾ, ಸರಕುಳಿ, ಸಿದ್ದಾಪುರ ತಾಲೂಕಿನ ಹಿತ್ಲಕೈ, ಬಾಳೂರು, ಬಾಳೇಸರ ಮುಂತಾದ ಗ್ರಾಮಗಳಲ್ಲಿ ನೀರಿಲ್ಲದೇ ಜನಸಾಮಾನ್ಯರು ಹೈರಾಣಾಗಿದ್ದಾರೆ.
 ಅಘನಾಶಿನಿ ನದಿಯ ಉಪನದಿಗಳಲ್ಲಿಯೂ ಕೂಡ ನೀರಿಲ್ಲ. ಅಘನಾಶಿನಿ ನದಿ ಮೂಲದಲ್ಲಿಯೂ ಕೂಡ ನೀರಿಲ್ಲ. ಪ್ರಮುಖ ಉಪನದಿಯಾದ ಭತ್ತಗುತ್ತಿಗೆ ಹೊಳೆಯಲ್ಲಿ ನೀರಿಲ್ಲ. ಭತ್ತಗುತ್ತಿಗೆ ಹೊಳೆಯ ಮೂಲ ಎನ್ನಿಸಿಕೊಂಡಿರುವ ಹನುಮಂತಿ ಕೆರೆ ಹೂಳು ತುಂಬಿದೆ. ಬೆಣ್ಣೆಹಳ್ಳ, ಬುರುಡೆ ಜಲಪಾತಕ್ಕೆ ಕಾರಣವಾದ ಬೀಳಗಿ ಹೊಳೆಯಲ್ಲಿಯೂ ಕೂಡ ನೀರಿಲ್ಲ. ಇದೆಲ್ಲದರ ಪರಿಣಾಮ ಕರಾವಳಿ ಪ್ರದೇಶದಲ್ಲಿಯೂ ಕಾಣಿಸಿಕೊಳ್ಳಲು ಆರಂಭಿಸಿದೆ. ಅರಬ್ಬಿ ಸಮುದ್ರ ನೀರು ಅಘನಾಶಿನಿ ನದಿಯ ಒಳಗೆ ನುಗ್ಗಲು ಆರಂಭಿಸಿದೆ. ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಕಾರಣ ಹಲವು ಕಿಲೋಮೀಟರ್ ಒಳಭಾಗದ ವರೆಗೆ ಉಪ್ಪುನೀರು ನುಗ್ಗಿದೆ.
ದೇವರ ಅಭಿಷೇಕಕ್ಕೂ ನೀರಿಲ್ಲ :
 ಅಘನಾಶಿನಿ ನದಿ ತೀರದಲ್ಲಿದ್ದ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕಕೂ ನೀರಿಲ್ಲ. ದೇವರ ಪೂಜೆಗಾಗಿ ಕಿಲೋಮೀಟರ್ ದೂರದಿಂದ ನೀರು ಹೊತ್ತು ತರಬೇಕಾದಂತಹ ಪರಿಸ್ಥಿತಿ ನಿಮರ್ಾಣವಾಗಿದೆ. ಗುಡ್ಡೇತೋಟದ ಕೋಟೆ ವಿನಾಯಕ, ಬಾಳೂರಿನ ದೇವಾಲಯಗಳಲ್ಲಿ ದೇವರ ಅಭಿಷೇಕಕ್ಕೆ ದೂರದ ಸ್ಥಳಗಳಿಂದ ನೀರನ್ನು ಹೊತ್ತು ತರಬೇಕಾದ ಪರಿಸ್ಥಿತಿ ನಿಮರ್ಾಣವಾಗಿದೆ. ಅಘನಾಶಿನಿ ನದಿಯಲ್ಲಿಯೇ ಆಳದ ಹೊಂಡಗಳಲ್ಲಿ ನಿಂತುಕೊಂಡಿರುವ ನೀರನ್ನು ತಂದು ದೇವಾಲಯ, ಮನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಮಲೆನಾಡಿನ ಹಳ್ಳಿಗಳಲ್ಲಿಯೂ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.
 ಕೇವಲ ಅಘನಾಶಿನಿ ಮಾತ್ರವಲ್ಲ ಮಲೆನಾಡಿನಲ್ಲಿ ಹಲವಾರು ನದಿಗಳು ಬತ್ತಲು ಆರಂಭವಾಗಿದೆ. ಯಲ್ಲಾಪುರಕ್ಕೆ ನೀರಿನ ಮೂಲವಾಗಿದ್ದ ಬೇಡ್ತಿ ನದಿ ಈಗಾಗಲೇ ಬತ್ತಿ ಹೋಗಿದೆ. ಶಾಲ್ಮಲಾ ನದಿ ಕೂಡ ಬತ್ತಲು ಆರಂಭವಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಹಳ್ಳಗಳು, ಜಲಮೂಲಗಳೆಲ್ಲ ಸಂಪೂರ್ಣವಾಗಿ ಬತ್ತಿಹೋಗಿದೆ. ಬರದ ಬೇಗೆ ಮಲೆನಾಡಿಗರನ್ನು ಹೈರಾಣಾಗಿಸಿದೆ. ಯಾವಾಗ ಮಳೆ ಬರುತ್ತದೆಯೋ ಎಂದು ಜನಸಾಮಾನ್ಯರು ಆಗಸದತ್ತ ಮುಖ ಮಾಡುತ್ತಿದ್ದಾರೆ.

--------

 ಅಘನಾಶಿನಿ ನದ ಈ ಹಿಂದೆ ಯಾವಾಗಲೂ ಬತ್ತಿರಲಿಲ್ಲ. ನನಗೆ ತಿಳಿದಂತೆ ಅಘನಾಶಿನಿ ನದಿ ಯಾವಾಗಲೂ ನೀರಿನ ಹರವನ್ನು ನಿಲ್ಲಿಸಿರಲಿಲ್ಲ. 1870ರ ದಶಕದಲ್ಲಿ ಭಾರಿ ಬರಗಾಲ ಬಂದ ಸಂದರ್ಭದಲ್ಲಿ ಉಳಿದ ಕಡೆಗಳಲ್ಲಿ ನೀರಿನ ಬವಣೆ ಆಗಿತ್ತಂತೆ. ಆದರೆ ಅಘನಾಶಿನಿ ನದಿ ಅಂತಹ ಸಂದರ್ಭದಲ್ಲಿಯೂ ಕೂಡ ಬತ್ತಿರಲಿಲ್ಲ. ಈ ಸಾರಿ ಸಂಪೂರ್ಣವಾಗಿ ಬತ್ತಿಹೋಗಿದೆ. ಗುಡ್ಡೇತೋಟದ ಕೋಟೆ ವಿನಾಯಕ ದೇವರಿಗೆ ಅಭಿಷೇಕ ಮಾಡಲು ಕಿಲೋಮೀಟರ್ ದೂರದಿಂದ ನೀರನ್ನು ಹೊತ್ತು ತರುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ.ದತ್ತಾತ್ರೆಯ ಭಟ್
ಅರ್ಚಕರು

------------

 ಬರದ ಕಾರಣ ಅಘನಾಶಿನಿ ನದಿ ಶತಮಾನಗಳ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಹರಿವನ್ನು ನಿಲ್ಲಿಸಿದೆ. ಈ ಅಘನಾಶಿನಿ ನದಿಯ ಹಲವು ಕಡೆಗಳಲ್ಲಿ ಬೀಡು ಬಿಟ್ಟು, ಆವಾಸಸ್ಥಾನ ಮಾಡಿಕೊಂಡಿದ್ದ ಅಪರೂಪದ ನೀರು ನಾಯಿಗಳು ಬಿಸಿಯಾಗಿರುವ ನೀರು ಹಾಗೂ ಆಹಾರದ ಅಭಾವದಿಂದಾಗಿ ಸಾವಿನ ಅಂಚನಲ್ಲಿವೆ.
 ಉತ್ತರ ಕನ್ನಡ ಜಿಲ್ಲೆಯಲ್ಲಿ 98 ಕಿಲೋಮೀಟರ್ ದೂರದ ವರೆಗೆ ಹರಿದು ಸಮುದ್ರ ಸೇರುವ ಅಘನಾಶಿನಿ ನದಿಯಲ್ಲಿ ಅಪರೂಪದ ಜೀವಿಯಾಗಿರುವ ನೀರುನಾಯಿಗಳು ವಾಸಸ್ಥಾನ ಮಾಡಿಕೊಂಡಿವೆ. ಕುಮಟಾ ತಾಲೂಕಿನ ಉಪ್ಪಿನಪಟ್ಟಣದಿಂದ ಉಂಚಳ್ಳಿ ಜಲಪಾತದ ವರೆಗಿನ ಪ್ರದೇಶದಲ್ಲಿ, ಘಟ್ಟದ ಮೇಲಿನ ಸಿದ್ದಾಪುರ ತಾಲೂಕಿನ ಮಾನಿಹೊಳೆಯ ಸುತ್ತಮುತ್ತ, ಶಿರಸಿ-ಸಿದ್ದಾಪುರ ತಾಲೂಕಿನ ಗಡಿಯಲ್ಲಿರುವ ಬಾಳಗಾರ, ನಾಡಗುಳಿ ಮುಂತಾದ ಪ್ರದೇಶದಲ್ಲಿ ಅಘನಾಶಿನಿ ನದಿಯಲ್ಲಿ ನೀರುನಾಯಿಗಳು ವಾಸಿಸುತ್ತವೆ. ಅಘನಾಶಿನಿ ನದಿಯ ಆಳದ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಇವು ಗುಂಪು ಗುಂಪಾಗಿ ವಾಸ ಮಾಡುತ್ತಿವೆ. ಆದರೆ ಅಘನಾಶಿನಿ ನದಿ ಬರದ ಬೇಗೆಯಿಂದಾಗಿ ಹರಿವು ನಿಲ್ಲಿಸಿರುವ ಕಾರಣ ಅಪರೂಪದ ನೀರುನಾಯಿಗಳು ಸಾವಿನ ಅಂಚಿನಲ್ಲಿವೆ.
 ಇಂಗ್ಲೀಷಿನಲ್ಲಿ ಲೂತ್ರಾ ಲೂತ್ರಾ ಎನ್ನುವ ಹೆಸರಿನಿಂದ ಕರೆಯಲ್ಪಡುವ ನೀರುನಾಯಿಗಳು ಭಾರತದಲ್ಲಿ ಕಾಶ್ಮೀರ, ಅಸ್ಸಾಂಗಳಲ್ಲಿ ಹೇರಳವಾಗಿ ಕಾಣಸಿಗುತ್ತದೆ. ದಕ್ಷಿಣ ಭಾರತದ ಹಲವು ಕಡೆಗಳಲ್ಲಿಯೂ ನೀರುನಾಯಿಗಳನ್ನು ಕಾಣಬಹುದಾಗಿದೆ. ಆದರೆ ಕನರ್ಾಟಕದಲ್ಲಿ ಈ ನೀರು ನಾಯಿಯ ಆವಾಸ ಸ್ಥಾನ ಬಹಳ ಸೀಮಿತವಾಗಿದೆ. ಶುದ್ಧ ನೀರು ಇರುವ ಆಳವಾದ ನದಿಗಳಲ್ಲಿ ಇವು ಜೀವಿಸುತ್ತವೆ. ಉತ್ತರ ಕನ್ನ ಜಿಲ್ಲೆಯಲ್ಲಿ ಅಘನಾಶಿನಿ ನದಿ ಕಣಿವೆಯಲ್ಲಿ ಮಾತ್ರ ಈ ನೀರು ನಾಯಿಗಳು ಕಾಣಸಿಗುತ್ತವೆ. ಶತಮಾನಗಳ ಹಿಂದೆ ಶರಾವತಿ ಹಾಗೂ ಕಾಳಿ ನದಿಗಳಲ್ಲಿಯೂ ನೀರುನಾಯಿಗಳು ಇದ್ದವಂತೆ. ಆದರೆ ನಂತರದ ದಿನಗಳಲ್ಲಿ ಶರಾವತಿ, ಕಾಳಿ ನದಿಗಳಲ್ಲಿ ನೀರುನಾಯಿಗಳು ನಶಿಸಿಹೋದವು. ಆದರೆ ಅಘನಾಶಿನಿ ನದಿಯಲ್ಲಿ ಮಾತ್ರ ಸಂತಾನವೃದ್ಧಿ ಮಾಡಿಕೊಂಡು ಬದುಕಿದ್ದವು. ಆಳದ ನೀರಿನಲ್ಲಿ ಇರುವ ಮೀನುಗಳು, ಏಡಿಗಳು, ಕಪ್ಪೆಗಳು, ಕೊಕ್ಕರೆ, ನೀರುಕೋಳಿ, ಬಾತುಕೋಳಿಗಳು ನೀರುನಾಯಿಗಳ ಪ್ರಮುಖ ಆಹಾರ. ನದಿ ಸಮೀಪದ ಬಂಡೆಗಳ ಪೊಟರೆಗಳಲ್ಲಿ ಇವು ವಾಸ ಮಾಡುತ್ತವೆ. ನೋಡಲು ಬಹು ಸುಂದರವಾಗಿರುವ, ಮುದ್ದುಮುದ್ದಾಗಿರುವ ನೀರುನಾಯಿಗಳು ಒಮ್ಮೆಗೆ ಗರಿಷ್ಟ 4 ಮರಿಗಳನ್ನು ಹೆರುತ್ತವೆ. 60 ದಿನಗಳ ಅವಧಿಯಲ್ಲಿ ಗರ್ಭಧರಿಸಿ ಮರಿ ಹಾಕುತ್ತವೆ.
 ಅಘನಾಶಿನಿ ನದಿಯಲ್ಲಿ ವಾಸ ಮಾಡುತ್ತಿದ್ದ ನೀರುನಾಯಿಗಳಿಗೆ ಈವರೆಗೂ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಈ ಸಾರಿ ಬರದ ಬೇಗೆಯಿಂದಾಗಿ ಅಘನಾಶಿನಿ ನದಿ ಹರಿವು ನಿಲ್ಲಿಸಿ ಸಂಪೂರ್ಣ ಬತ್ತಿದೆ. ಆಳದ ಗುಂಡಿಗಳಲ್ಲಿ ಅಲ್ಲಲ್ಲಿ ನೀರು ನಿಂತಿರುವಲ್ಲಿ ನೀರು ನಾಯಿ ಬದುಕಿದೆಯಾದರೂ ಬದಲಾದ ಪ್ರಾಕೃತಿಕ ಕಾರಣಗಳಿಂದಾಗಿ ಸಾವಿನ ಅಂಚಿನಲ್ಲಿವೆ. ಅಲ್ಲಲ್ಲಿ ನಿಂತಿರುವ ನೀರು ಬಿಸಿಲಿನ ಬೇಗೆಗೆ ಬಿಸಿಯಾಗಿದೆ. ನೀರಿನಲ್ಲಿದ್ದ ಮೀನುಗಳು ಈಗಾಗಲೇ ಸತ್ತು ತೇಲುತ್ತಿವೆ. ತಂಪು ನೀರಿನ ವಾತಾವರಣಕ್ಕೆ ಹೊಂದಿಕೊಂಡಿದ್ದ ನೀರುನಾಯಿಗಳು ಏಕಾಏಕಿ ಬಿಸಿಯಾಗಿರುವ ನೀರಿನಿಂದಾಗಿ ಚಡಪಡಿಸುತ್ತಿವೆ. ಸೂಕ್ಷ್ಮವಾಗಿರುವ ನೀರುನಾಯಿಗಳ ಚರ್ಮ ಇದಕ್ಕೆ ಹೊಂದಿಕೊಳ್ಳುತ್ತಿಲ್ಲ. ಇದಲ್ಲದೇ ಪ್ರಮುಖ ಆಹಾರವಾಗಿರುವ ಕಪ್ಪೆ, ಮೀನು, ಏಡಿಗಳೆಲ್ಲ ಬಿಸಿಲಿನ ಬೇಗೆಗೆ ಸತ್ತಿವೆ. ನೀರುಕೋಳಿ, ಬಾತುಕೋಳಿಗಳು ನೀರಿನ ಮೂಲವನ್ನು ಅರಸಿ ಬೇರೆ ಕಡೆಗೆ ವಲಸೆ ಹೋಗಿವೆ. ಇದರಿಂದಾಗಿ ಆಹಾರ ಕೂಡ ಸಿಗದಂತೆ ಆಗಿರುವ ನೀರುನಾಯಿಗಳು ಸಾವಿನ ಅಂಚನ್ನು ತಲುಪುತ್ತಿವೆ.
 ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಮೂನರ್ಾಲ್ಕು ದಿನಗಳ ಕಾಲ ಅಲ್ಪ ಮಳೆಯಾಗಿದೆ. ಮಳೆಯ ಕಾರಣದಿಂದ ವಾತಾವರಣ ತಂಪಾಗಿದ್ದರೂ ಕೂಡ ನದಿಗಳಲ್ಲಿ ನೀರು ಹರಿದಿಲ್ಲ. ಅಘನಾಶಿನಿ ನದಿಯ ಪಾತ್ರದಲ್ಲಿ ಮಳೆ ಸುರಿದಿದ್ದರೂ ಇದರಿಂದಾಗಿ ಬತ್ತಿದ ನದಿಗೆ ಜೀವ ಬಂದಿಲ್ಲ. ಪರಿಣಾಮವಾಗಿ ಸಾವಿನ ಅಂಚು ತಲುಪಿರುವ ನೀರುನಾಯಿಗಳ ಬದುಕು ಇನ್ನೂ ದುರಂತದತ್ತಲೇ ಸಾಗುತ್ತಿದೆ. ಜೂನ್ ತಿಂಗಳಿನಲ್ಲಿ ಮಳೆ ಬರುತ್ತದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಈಗಾಗಲೇ ಸಾವಿನ ಅಂಚಿನಲ್ಲಿರುವ ನೀರುನಾಯಿಗಳು ಇನ್ನೂ 15 ದಿನಗಳ ಕಾಲ ಸ್ವಲ್ಪ ನೀರಿನಲ್ಲಿ, ಆಹಾರವಿಲ್ಲದೇ ಬದುಕುವುದು ಅಸಾಧ್ಯ ಎನ್ನುವಂತಾಗಿದೆ.
 ಅಘನಾಶಿನಿ ನದಿ ಹರಿವು ನಿಲ್ಲಿಸಿದ ಪರಿಣಾಮ ಈಗಾಗಲೇ ಮೀನು, ಕಪ್ಪೆ, ಏಡಿ ಮುಂತಾದ ಜಲಚರಗಳ ಮೇಲೆ ಉಂಟಾಗಿದ್ದು ಅದರ ನಂತರದ ಹಂತ ಎಂಬಂತೆ ನೀರುನಾಯಿಗಳು ಬಲಿಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ನದಿಯ ಅಕ್ಕಪಕ್ಕದಲ್ಲಿರುವ ಅಪ್ಪೆಮರಗಳು, ಮಿಡಿಮಾವಿನ ಮರಗಳಮೇಲೂ ಉಂಟಾಗಲಿದೆ. ಈ ನದಿ ಪಾತ್ರದಲ್ಲಿ ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿ, ನದಿಯನ್ನು ಪುನಶ್ಚೇತನಗೊಳಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಈ ಎಲ್ಲ ಜೀವ ಸಂಕುಲ ನಾಮಾವಶೇಷವಾಗುವುದರಲ್ಲಿ ಸಂದೇಹವೇ ಇಲ್ಲ

---------

 ನೀರುನಾಯಿಗಳು ಅಪರೂಪದ ಪ್ರಾಣಿಗಳು. ಅಳಿವಿನ ಅಂಚಿನಲ್ಲಿವೆ. ಇವನ್ನು ದೊಡ್ಡ ಪ್ರಮಾಣದಲ್ಲಿ ಚರ್ಮಕ್ಕಾಗಿ ಕಳ್ಳಸಾಗಾಣಿಕೆ ಮಾಡಲಾಗುತ್ತಿತ್ತು. ಇದೀಗ ನದಿ ಬತ್ತಿ ಹೋಗಿರುವಂತಹ ಅಪರೂಪದ ಕಾರಣದಿಂದಾಗಿ ಸಾಯುತ್ತಿದೆ. ಯಾವುದೇ ನದಿಯಲ್ಲಿ ಕನಿಷ್ಟ ಪಾರಿಸಾರಿಕ ಹರಿವು ಇರುವುದು ಅನಿವಾರ್ಯ. ಕನಿಷ್ಟ ಪಾರಿಸಾರಿಕ ಹರಿವು ಇದ್ದಾಗ ಮಾತ್ರ ನದಿ ನೀರನ್ನು ಅವಲಂಬಿಸಿರುವ ಜೀವಿ, ವೃಕ್ಷ, ಪಕ್ಷಿ ಸಂಕುಲಗಳು ಜೀವಂತ ಇರುತ್ತವೆ. ಅದು ನಿಂತರೆ ಏನು ದುಷ್ಪರಿಣಾಮ ಉಂಟಾಗಲಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ನದಿ ಹರಿವು ನಿಂತಾಗಲೇ ಈ ರೀತಿ ದುರಂತ ಸಂಭವಿಸುತ್ತಿದೆ. ಇನ್ನು ನದಿ ತಿರುವು ಮಾಡಿದರೆ ಎಂತಹ ದುಷ್ಪರಿಣಾಮ ಆಗಬಹುದು ಎನ್ನುವುದು ಊಹೆಗೂ ನಿಲುಕುವುದಿಲ್ಲ.ಬಾಲಚಂದ್ರ ಸಾಯಿಮನೆ
ಪರಿಸರ ವಿಜ್ಞಾನಿ


(VISHWAVANI ARTICLE)

5 comments:

  1. ತುಂಬಾ ಬೇಸರದ ಸಂಗತಿ,,,,ಈ ನದಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ??ನಮ್ಮ ನೇತ್ರಾವತಿಯನ್ನು ತಿರುಗಿಸ್ಯೆ ಬಿಟ್ಟರು

    ReplyDelete
  2. ಹಿಂದೆ ಶರಾವತಿ ಹಿನ್ನೀರಿನಲ್ಲಿ ನೀರು ನಾಯಿಗಳು ತುಂಬಾ ಇದ್ದವು. ಆದರೆ ಈಗ ಕಾಣಿಸುತ್ತಿಲ್ಲ. ಇದಕ್ಕೆ ಬಹುಶಃ ಈ ಪ್ರದೇಶದ ಗದ್ದೆ, ತೋಟಗಳಿಗೆ ಬಳಸುವ ಕೀಟ ನಾಶಕ ಬಂದು ಮುಳುಗಡೆಗೆ ಸೇರುವುದಾಗಿದೆ.

    ReplyDelete
  3. ನಿಜಕ್ಕೂ ಬೇಸರ ಆಗ್ತಿದೆ, ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ನದಿಗಳ ಕಥೆಯೇ ಈ ರೀತಿಯಾದರೆ ಪರಿಸರದ ಗತಿಯೇನು, ನಿಮ್ಮ ಲೇಖನದಲ್ಲಿ ವಿವರಿಸಿರುವಂತೆ ನೀರು ನಾಯಿಗಳು ಖಂಡಿತಾ ಅಳಿವಿನ ಅಂಚಿನಲ್ಲಿವೆ, ನಾವುಗಳು ನಮ್ಮ ಜೀವನದಲ್ಲಿ ಅವುಗಳನ್ನು ಬಹಳ ಹತ್ತಿರದಿಂದ ಕಂಡಿದ್ದೇವೆ , ಆದರೆ ನೀರು ನಾಯಿ ಎಂಬ ಒಂದು ಜೀವಿ ಇದೆ ಅನ್ನೋದೇ ಪಟ್ಟಣದ ಮಕ್ಕಳಿಗೆ ಯಾಕೆ ನಮ್ಮನಾಡಿನ ಕೆಲ ಪ್ರದೇಶದ ಹಳ್ಳಿಯ ಮಕ್ಕಳಿಗೂ ಅರಿವಿಲ್ಲ. ನಾಚಿಕೆ ಸ್ವಭಾವದ , ಯಾರಿಗೂ ತೊಂದರೆ ಕೊಡದ ಜೀವಿಗಳು ಇವು, ಕಾವೇರಿ ನದಿ ಯಲ್ಲಿಯೂ ಸಹ ರಂಗನ ತಿಟ್ಟಿನ ಆಸು ಪಾಸು ಇವುಗಳನ್ನು ಅಪರೂಪಕ್ಕೆ ಕಾಣ ಬಹುದು, ಅಲ್ಲಿಯೂ ಸಹ ಅವುಗಳು ಅಳಿವಿನ ಅಂಚಿನಲ್ಲಿವೆ. ಬಹಳ ಮನ ಕಲಕುವ ಲೇಖನ ನಿಮ್ಮದು, ಒಳ್ಳೆಯ ಮಾಹಿತಿಗಾಗಿ ನಿಮಗೆ ಕೃತಜ್ಞ .

    ReplyDelete
  4. sharavati nadiyalli ega neerunayi illa shreepati avre. neeru malinavagi iruva kaarana neerunayi sharavati nadiyalli illa

    ReplyDelete
  5. Nija Baalanna
    Malenadu sampoorna halagide. modalina hage illa. Neeru naayigalu kevala 100 ra samkyeyalli ide aste. Nanu 1 neeru nayiya photo k 15 days odadiddene. aadroo sikkilla. Houdu nanu Facebook nalli ee article share madidaga obbaru neeru nayi andre enu anta kelidru. avrige arta madisotanaka sako sakaytu.

    ReplyDelete